ಒಂದಾಣೆ ಮಾಲೆ ಪ್ರಕಟಣೆಯ ಡಿಜಿಟಲ್ ಕನ್ನಡ ಪುಸ್ತಕಗಳು


"ಒಂದಾಣೆ ಮಾಲೆ ಪ್ರಕಟಣೆಯ ಡಿಜಿಟಲ್ ಕನ್ನಡ ಪುಸ್ತಕಗಳ ಸುಲಭ ಲಭ್ಯತೆಗೆ ಡಿಜಿಟಲ್ ಸಂಚಯವನ್ನು ಸೃಷ್ಟಿಸಲಾಗಿದೆ‍!. ಈ ಕಾರ್ಯಕ್ಕೆ ಆಸಕ್ತರು, ಪುಸ್ತಕಗಳನ್ನು ಹೊಂದಿರುವವರು, ನಮ್ಮ ತಾಂತ್ರಿಕ ಕೆಲಸಗಳಿಗೆ ಸಹಕರಿಸುವವರು, ಯಾರು ಬೇಕಾದರೂ ಕೈ ಜೋಡಿಸಬಹುದು. ಸಂಪರ್ಕಿಸಿ [email protected]

ಕುಡ್ಪಿ ವಾಸುದೇವ ಶೆಣೈ
(೧೯೦೭-೧೯೭೭) ಪರಿಚಯ

ಮಂಗಳೂರಿನ ಪ್ರಸಿದ್ಧ ಪತ್ರಕರ್ತ, ನಾಟಕಕಾರ, ಸಾಹಿತಿ, ವ್ಯಂಗ್ಯ ಲೇಖಕ ಹಾಗೂ ಹಾಸ್ಯ ಲೇಖಕರಾಗಿದ್ದ ಬಹುಮುಖ ಪ್ರತಿಭಾವಂತ ದಿ|ಕುಡ್ಪಿ ವಾಸುದೇವ ಶೆಣೈ(ಅಥವಾ ಕುಡ್ಪಿಯವರು) ತಮ್ಮ ಇಡೀ ಜೀವನವನ್ನು ಸಾಹಿತ್ಯ ಮತ್ತು ಕಲಾರಂಗಕ್ಕೆ ಮುಡುಪಾಗಿಟ್ಟ ಒಬ್ಬ ಧೀಮಂತ ವ್ಯಕ್ತಿ. ೧೯೦೭ನೇ ಇಸವಿಯಲ್ಲಿ ಮಂಗಳೂರಿನಲ್ಲಿ ಕುಡ್ಪಿ ನರಸಿಂಹ ಶೆಣೈ ಹಾಗೂ ಕಲ್ಯಾಣಿ ಬಾಯಿಯವರ ಸುಪುತ್ರನಾಗಿ ಜನಿಸಿದ ಕುಡ್ಪಿಯವರು ತಮ್ಮ ಪ್ರಾರಂಭಿಕ ಶಿಕ್ಷಣವನ್ನು ಕೆನರಾ ಹೈಸ್ಕೂಲಿನಲ್ಲಿ ಪಡೆದರು. ತಮ್ಮ ಎಳೇಯ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಅವರ ಮೇಲೆ ದುಡಿಯುವ ಜವಾಬ್ದಾರಿ ಬಿದ್ದು ಉನ್ನತ ಶಿಕ್ಷಣ ಪಡೆಯುವುದರಿಂದ ಅವರು ವಂಚಿತರಾಗಬೇಕಾಯಿತು. ನಂತರ ಅವರು ಉಡುಪಿಯ ಪ್ರಭಾಕರ್ ಪ್ರೆಸ್ ಹಾಗೂ ಮಂಗಳೂರಿನ ಕಂಠೀರವ ಮುದ್ರಣಾಲಯಗಳಲ್ಲಿ ದುಡಿದರು. ಕಂಠೀರವ ಮತ್ತು ಸ್ವದೇಶಾಭಿಮಾನಿ ಪತ್ರಿಕೆಗಳಲ್ಲಿ ಸಹಸಂಪಾದಕರೂ ಆಗಿದ್ದರು. ಕುಡ್ಪಿಯವರು ತಮ್ಮ ಸ್ವಂತ ವಾರಪತ್ರಿಕೆ ‘ಪ್ರಭಾತ’ವನ್ನು ೧೯೩೫ರಲ್ಲಿ ಪ್ರಾರಂಭಿಸಿದರು. ೧೯೪೧ರಲ್ಲಿ ‘ನವಭಾರತ’ ಪತ್ರಿಕೆಯ ಪ್ರಪ್ರಥಮ ಕಾರ್ಯನಿರ್ವಾಹಕ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಕುಡ್ಪಿಯವರು ‘ಪ್ರಭಾತ ಪ್ರಿಂಟರ್ಸ್ ಲಿಮಿಟೆಡ್’ ಎಂಬ ಕಂಪೆನಿ ಪ್ರಾರಂಭಿಸಿ ತಮ್ಮ ಪತ್ರಿಕೆ ‘ಪ್ರಭಾತ’ ಅಲ್ಲದೆ ಹಲವಾರು ಇತರ ಪತ್ರಿಕೆಗಳನ್ನು ಹಾಗೂ ಪುಸ್ತಕಗಳನ್ನು ಮುದ್ರಿಸಿ ಪ್ರಕಾಶಿಸಿದರು. ೧೯೫೪ರಿಂದ ೧೯೬೨ರ ತನಕ ‘ಒಂದಾಣೆಮಾಲೆ’ ಎಂಬ ಜನಪ್ರಿಯ ೩೪೨ ಕಿರು ಪುಸ್ತಕಗಳನ್ನು ವಾರಕ್ಕೊಂದರಂತೆ ಪ್ರಕಾಶಿಸಿದ ಅವರು ಹಲವಾರು ಹಿರಿಯ ಹಾಗೂ ನವ್ಯ ಸಾಹಿತಿಗಳನ್ನು ಪ್ರೋತ್ಸಾಹಿಸಿದರು. ಒಂದಾಣೆಗೆ ೨೦೦ಕ್ಕೂ ಮಿಕ್ಕಿದ ಪುಟಗಳ ಶ್ರೀಮದ್ಭಗವದ್ಗೀತೆಯನ್ನು ಒದಗಿಸಿದ ಕೀರ್ತಿ ಕುಡ್ಪಿಯವರಿಗೆ ಸಲ್ಲುತ್ತದೆ! ಕನ್ನಡ ಸಾಹಿತ್ಯ ರಂಗದಲ್ಲಿ ಅಪಾರ ಸೇವೆ ಸಲ್ಲಿಸಿದ ಕುಡ್ಪಿಯವರ ‘ಜಪಾನ್ ಬೆಳಕು, ‘ಮೀರೆ ಮತ್ತು ನಾನು’ ಹಾಗೂ ‘ಕಸದ ಡಬ್ಬಿಗಳು’ ಎಂಬ ಮೂರು ಹಾಸ್ಯ ಕಥಾ ಸಂಕಲನಗಳು ಮಧ್ಯಮ ವರ್ಗದ ಸಾಹಿತ್ಯ ಪ್ರಿಯರ ಅಚ್ಚುಮೆಚ್ಚಿನ ಪುಸ್ತಕಗಳಾಗಿ ಇಂದಿಗೂ ಹೆಸರುವಾಸಿಯಾಗಿವೆ. ಅವರು ಬರೆದ ಕನ್ನಡ ನಾಟಕಗಳಲ್ಲಿ ‘ಸನ್ಯಾಸಿ ಗೊಂಗಡಿ’, ‘ನಾವು ಸಾಹುಕಾರ ಕುಲದವರು’, ‘ನಾರೀಶ್ವರರು’ ‘ಸತ್ಯವಂತ ಬಾಬಿ’, ‘ಬಾಬಿಗೆ ಬಾಸಿಂಗ’, ‘ಚುನಾವಣೆ ಅರ್ಥಾತ್ ಬನಾವಣೆ’ ಮುಂತಾದವು ಯಶಸ್ವಿ ಪ್ರಯೋಗಗಳನ್ನು ಕಂಡಿವೆ. ೬೦ರ ದಶಕದಲ್ಲಿ ಕಲಾಭವನದ ಕಾರ್ಯದರ್ಶಿಗಳಾಗಿದ್ದ ಕುಡ್ಪಿಯವರು ಪ್ರತಿ ವರ್ಷ ನಾಟಕ ಸಪ್ತಾಹಗಳನ್ನು ಹಮ್ಮಿಕೊಂಡು ಉತ್ತಮ ಆದರ್ಶ ಮೆರೆದಿದ್ದಾರೆ. ಹಲವಾರು ಯುವಕರನ್ನು ಅಭಿನಯದಲ್ಲಿ ಪಳಗಿಸಿದ್ದಾರೆ. ತಮ್ಮ ಗುರು ದಿ. ಎಮ್.ಎನ್.ಕಾಮತರ ಪ್ರೇರಣೆಯಿಂದ ಸಾಹಿತ್ಯ ರಂಗವೆಂಬ ಸಾಗರಕ್ಕೆ ಧುಮುಕಿದ ಕುಡ್ಪಿಯವರು ಬಹಳಷ್ಟು ಕಠಿಣ ಪರಿಸ್ಥಿತಿಗಳಿಗೆದುರಾಗಿ ಈಜಿ ಕೊನೆಯುಸಿರಿನ ತನಕ ತಮ್ಮ ಕೈಗೂಸಾದ ‘ಪ್ರಭಾತ’ ವಾರಪತ್ರಿಕೆಯನ್ನು ನಡೆಸಿದರೆಂಬುದು ಉಲ್ಲೇಖನೀಯ!

See also :

Sanchaya